ಬ್ರ್ರೂಸೆಲ್ಲಾ ಜ್ವರ -
	ಬ್ರೂಸೆಲ್ಲಾ ವರ್ಗಕ್ಕೆ ಸೇರಿದ ರೋಗಾಣುಗಳಿಂದ ಉಂಟಾಗುವ ಸಾಂಕ್ರಾಮಿಕ ಜ್ವರ. ಡೇವಿಡ್ ಬ್ರೂಸ್ ಎಂಬಾತ ಈ ಜ್ವರಕ್ಕೆ ಕಾರಣೀಭೂತವಾದ ದಂಡಾಣುವನ್ನು ಪತ್ತೆ ಹಚ್ಚಿದ್ದರಿಂದ (1887) ಈ ಹೆಸರು. ಇದಕ್ಕೆ ಮಾಲ್ಟಾ ಜ್ವರ, ಜಿಬ್ರಾಲ್ಟರ್ ಜ್ವರ, ಭೂಮಧ್ಯ ಸಮುದ್ರ ಜ್ವರ, ತರಂಗಿತ ಜ್ವರ ಎಂಬ ಇತರ ಹೆಸರುಗಳೂ ಇವೆ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಭೂಮಧ್ಯ ಸಮುದ್ರದ ಆಸುಪಾಸಿನಲ್ಲಿದ್ದ ಆಂಗ್ಲ ಪದಾತಿ ಹಾಗೂ ನಾವಿಕ ಪಡೆಗಳಲ್ಲಿ ಹೊಸರೀತಿಯ ಒಂದು ಜ್ವರ ತಲೆದೋರಿ ವೈದ್ಯಕೀಯ ಸಿಬ್ಬಂದಿಗಳಿಗೆ ಒಗಟಾಗಿ ಪರಿಣಮಿಸಿತು. ಇದು ಮಲೇರಿಯಾ ಮತ್ತು ವಿಷಮ ಜ್ವರಗಳಿಂದ ಬೇರೆಯಾಗಿದ್ದು ಇದರ ಕಾರಣ ಹುಡುಕುವುದು ಕಷ್ಟಕರವಾಗಿತ್ತು. ಆಗಲೇ ಬ್ರೂಸ್ ತನ್ನ ಸಂಶೋಧನೆಯಿಂದ ಖ್ಯಾತನಾಮನಾದದ್ದು. ಬ್ರೂಸೆಲ್ಲಾ ವರ್ಗಕ್ಕೆ ಸೇರಿದ ಇನ್ನೆರಡು ಅಡ್ಡ ಜಾತಿಯ ರೋಗಾಣುಗಳನ್ನು 1897 ಹಾಗೂ 1914 ಕಂಡುಹಿಡಿಯಲಾಯಿತು. ಡೇವಿಸ್ ಬ್ರೂಸ್‍ನಿಂದ ಪ್ರಥಮವಾಗಿ ಗುರುತಿಸಲಾದ ದಂಡಾಣುಗಳ ಪೈಕಿ ಬ್ರೂಸೆಲ್ಲಾ ಮೆಲಿಟಿನ್ಸಿಸ್ ಮೊದಲಿಗೆ ಆಡುಗಳಿಗೆ ತಗಲಿ ಅವುಗಳಲ್ಲಿ ಸಾಂಕ್ರಾಮಿಕ ಗರ್ಭಪಾತ ಉಂಟುಮಾಡುತ್ತವೆ. 1897ರಲ್ಲಿ ಗುರುತಿಸಲಾದ ಬ್ರೂಸೆಲ್ಲಾ ಅಬಾರ್ಟಸ್ ಜಾನುವಾರುಗಳಲ್ಲಿ ಇದೇ ರೀತಿಯ ಗರ್ಭಪಾತ ಉಂಟುಮಾಡುತ್ತವೆ. 1914ರಲ್ಲಿ ಗುರುತಿಸಲಾದ ಬ್ರೂಸೆಲ್ಲಾ ಸೂಯಿಸ್ ಹಂದಿಗಳಲ್ಲಿ ಇದೇ ರೀತಿಯ ಕಾಯಿಲೆಗೆ ಕಾರಣವಾಗಿದೆ.

	ಈ ಮೂರು ಬಗೆಯ ರೋಗಾಣುಗಳು ಮನುಷ್ಯನ ದೇಹವನ್ನು ಆಕ್ರಮಿಸಿ ಬ್ರೂಸೆಲ್ಲಾ ಜ್ವರ ಉಂಟುಮಾಡಬಲ್ಲವು. ಮೇಲೆ ಹೆಸರಿಸಿರುವ ಪ್ರಾಣಿಗಳೊಡನೆ ಸದಾ ಸಂಪರ್ಕವಿರುವ ಜನರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುವುದು. ಅದಲ್ಲದೆ ಹಾಲುಸರಬರಾಜು, ಮಾಂಸ ವ್ಯಾಪಾರ, ಗೋಸಂಗೋಪನೆ, ಪಶುವೈದ್ಯ ಸಿಬ್ಬಂದಿ ಇಂಥ ವೃತ್ತಿಯಲ್ಲಿರುವವರಿಗೆ ಈ ರೋಗ ಹೆಚ್ಚಾಗಿ ತಗಲುತ್ತದೆ. ಬ್ರೂಸೆಲ್ಲಾ ರೋಗಾಣುಗಳು ದನದ ಮತ್ತು ಆಡಿನ ಸ್ತನಗಳಲ್ಲಿದ್ದು ಅವುಗಳ ಹಾಲಿನೊಂದಿಗೆ ಬೆರೆತಿರುತ್ತವೆ. ಆದ್ದರಿಂದ ಈ ರೋಗಾಣುಗಳಿಂದ ಕಲುಷಿತವಾದ ಹಾಲನ್ನು ಚೆನ್ನಾಗಿ ಕುದಿಸದೆ ಉಪಯೋಗಿಸಿದರೆ ಬ್ರೂಸೆಲ್ಲಾ ಜ್ವರ ಉಂಟಾಗುವುದು. ಅಲ್ಲದೆ ರೋಗಿಷ್ಠ ಪ್ರಾಣಿಯ ಮೂತ್ರ ಹಾಗೂ ಯೋನಿಸ್ರಾವಗಳ ಸಂಪರ್ಕವೂ ರೋಗಕಾರಕ. ಈ ವ್ಯಾಧಿ ಮೇಲೆ ಹೇಳಿದ ಯಾವುದೇ ಪ್ರಾಣಿಯ ಮೂಲಕ ಮನುಷ್ಯನಿಗೆ ತಗಲುವುದಲ್ಲದೆ ಮನುಷ್ಯನಿಂದ ಮನುಷ್ಯನಿಗೆ ಅಂಟುವುದಿಲ್ಲ. ಅಲ್ಲದೆ ಸ್ತ್ರೀಯರಲ್ಲಿ ಗರ್ಭಪಾತ ಉಂಟುಮಾಡುವುದೂ ಇದರ ವೈಶಿಷ್ಟ್ಯವಲ್ಲ.

	ರೋಗ ಲಕ್ಷಣ ಹಾಗೂ ಚಿಹ್ನೆಗಳು: ಸಾಮಾನ್ಯವಾಗಿ ಈ ರೋಗ ನಿಧಾನವಾಗಿ ಆರಂಭವಾಗುವುದು. ಮೈ ಕೈ ನೋವು, ಸಂದು ನೋವು ಬೆನ್ನು ನೋವು, ತಲೆಸಿಡಿತ, ಚಳಿಗಳಿಂದ ಕೂಡಿ ಇತರ ಯಾವುದೇ ಜ್ವರದಂತೆ ಇದರ ಲಕ್ಷಣಗಳಿರುವುದು. ಜ್ವರದ ಜತೆಯಲ್ಲಿ ವಿಪರೀತವಾಗಿ ಬೆವರುವಿಕೆ ಮತ್ತು ಅಂಗೋಪಾಂಗಗಳಲ್ಲಿ ಬಲಹೀನತೆ ಕಂಡು ಬರುವುದು. ದಿನಗಳು ಉರುಳಿದಂತೆ ಹಸಿವು ಕಡಿಮೆಯಾಗಿ ದೇಹ ಕೃಶವಾಗುತ್ತ ಬರುತ್ತದೆ. ಜ್ವರ ದಿನದ ಒಂದು ನಿರ್ದಿಷ್ಟ ವೇಳೆಗೆ ಏರಿ ಮತ್ತೆ ಇಳಿಯುತ್ತದೆ. ತಾಪ ಸಾಧಾರಣ 1000 ಫ್ಯಾನಿಂದ 1030 ಫ್ಯಾ ವರೆಗೆ ಇರುವುದು. ಆಸ್ಪತ್ರೆಗಳಲ್ಲಿ ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಜ್ವರ ಅಳೆದು ರೇಖಾಪಟ್ಟಿಯ ಮೇಲೆ ಚಿತ್ರಿಸಿದರೆ ಅದು ಅಲೆಯ ಸ್ವರೂಪದಲ್ಲಿ ಕಾಣುವುದು. ಇದರಿಂದಾಗಿ ಇದಕ್ಕೆ ತರಂಗಿತ ಜ್ವರ ಎಂಬ ಹೆಸರುಂಟು.

	ರೋಗಿಯನ್ನು ಪರೀಕ್ಷಿಸಿದರೆ ಅವನ ಯಕೃತ್ ಮತ್ತು ಗುಲ್ಮಗಳು ಊದಿ ಹಿರಿದಾಗಿರುವುದನ್ನು ಉದರದ ಮೇಲಿನ ಮತ್ತು ಎದುರಿನ ಭಾಗ ಅಮುಕಿ ಕಂಡುಹಿಡಿಯಬಹುದು. ಇದಲ್ಲದೆ ದುಗ್ಧರಸಗ್ರಂಥಿಗಳು ಕೂಡ ದೇಹದ ನಾನಾ ಕಡೆಗಳಲ್ಲಿ ಊದಿಕೊಂಡಿರುವುವು. ರಕ್ತದ ಮೂಲಕ ಹರಡಿ ಬೀಜದ ಉರಿತ, ಬೆಂಗಂಬದಲ್ಲಿ ನೋವು ಉಂಟುಮಾಡಬಹುದು. ಕೆಲವೊಮ್ಮೆ ಈ ರೋಗದಿಂದ ಮಾನಸಿಕ ರೋಗದ ಲಕ್ಷಣಗಳೂ ಕಾಣಿಸಿಕೊಳ್ಳುವುವು.	

	ರೋಗ ನಿದಾನ: ಯಾವ ರೋಗಿಯಾದರೂ ದೀರ್ಘ ಕಾಲದ ವಾಯಿದೆ ಜ್ವರದಿಂದ ನರಳುತ್ತಿದ್ದರೆ, ಅವನ ಉದ್ಯೋಗದಲ್ಲಿ ಪ್ರಾಣಿಗಳ ಸಂಪರ್ಕವಿದ್ದರೆ ಅಥವಾ ಅಂಥ ರೋಗಪೀಡಿತ ಹಸು ಅಥವಾ ಆಡಿನ ಹಾಲು ಉಪಯೋಗಿಸಿದ ಸಂಶಯವಿದ್ದರೆ ಬ್ರೂಸೆಲ್ಲಾ ರೋಗದ ಸಾಧ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ರೋಗವನ್ನು ರುಜುಪಡಿಸುವಂತೆ ಅಂಟಿಕೆ (ಅಗ್ಲುಟಿನೇಶನ್) ಪರೀಕ್ಷೆ ಮಾಡಬಹುದು; ರೋಧಜನಕವನ್ನು ಮಿಶ್ರಣಗೊಳಿಸಿದಲ್ಲಿ ರೋಧಜನಕದ ಕಣಗಳು ಒಂದಕ್ಕೊಂದು ಅಂಟಿಕೊಳ್ಳುವುದನ್ನು ಸೂಕ್ಷ್ಮದರ್ಶಕದಲ್ಲಿ ನೋಡಬಹುದು. ಹೀಗಾದಾಗ ರೋಗಿ ಬ್ರುಸೆಲ್ಲಾ ಜ್ವರದಿಂದ ಪೀಡಿತನೆಂಬುದು ಸ್ಪಷ್ಟ.

	ಚಿಕಿತ್ಸೆ: ರೋಗದ ಚಿಕಿತ್ಸೆಯಲ್ಲಿ ದಿನಕ್ಕೆ ಎರಡು ಬಾರಿ 100 ಮಿ.ಗ್ರಾಂ ಡೋರ್ಸ್‍ಸೈಕ್ಲಿನ್ ಮತ್ತು ಒಮ್ಮೆ 600 ಮಿ.ಗ್ರಾಂ ರಿಫಾಂಪಿಸಿನ್ 21 ದಿನಗಳ ಕಾಲ ಕೊಡಬೇಕಾಗುವುದು. ಇಲ್ಲವೆ ಟ್ರೈಮೆಥೊಪ್ರಿಂ (600 ಮಿ.ಗ್ರಾಂ) ಮತ್ತು ಸಲ್ಫಾಮೆಥಾಕ್ಸಜೇರ್ (2400 ಮಿ.ಗ್ರಾಂ) ಕೊಡಬಹುದು. ಆದರೆ ಅದರಲ್ಲಿ ರೋಗದ ಮರುಕಳಿಕೆ ವಿಶೇಷ.

	ರೋಗ ನಿರೋಧ ವಿಧಾನ: ಪ್ರಾಣಿಗಳಲ್ಲಿ ಈ ರೋಗವನ್ನು ತಡೆಗಟ್ಟುವುದರ ಮೂಲಕ ಮನುಷ್ಯರಲ್ಲಿ ಇದನ್ನು ಕಡಿಮೆ ಮಾಡಬಹುದು. ರೋಗ ಪೀಡಿತ ಜಾನುವಾರಗಳ ಸಂಪರ್ಕದಲ್ಲಿರುವವರು ತಮ್ಮ ನೈರ್ಮಲ್ಯ ಕಾಪಾಡಿಕೊಂಡಿದ್ದರೆ ರೋಗ ಬರದಂತೆ ತಡೆಹಿಡಿಯಬಹುದು. ಮನೆ, ಶಾಲೆ, ಹೋಟೆಲು ಮುಂತಾದೆಡೆ ಬಳಸುವ ಹಾಲನ್ನು ಕಡ್ಡಾಯವಾಗಿ ಪಾಸ್ತರೀಕರಿಸುವುದರಿಂದ ಹಾಲಿನೊಡನೆ ಕಲಬೆರೆಕೆಯಾದ ರೋಗಾಣುಗಳು ನಾಶಹೊಂದಿ ಈ ರೋಗ ಬಾರದಂತಾಗುವುದು.	  (ಎ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ